ಮದ್ದಾಲೆ - 
	ಅಪೋಸೈನೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಮರ (ಡಿಟಬಾರ್ಕ್). ಸಪ್ತಪರ್ಣಿ, ಜಂತಾಲ, ಕೋಡಾಲೆ ಪರ್ಯಾಯನಾಮಗಳು. ಆಲ್‍ಸ್ಟೋನಿಯ ಸ್ಕಾಲರಿಸ್ ಇದರ ಶಾಸ್ತ್ರೀಯ ಹೆಸರು. ಭಾರತ ಮತ್ತು ಆಸ್ಟ್ರೇಲಿಯಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚು. ಹೇರಳವಾಗಿದೆ. 

	ಇದು ಸುಮಾರು 15-20ಮೀ ಎತ್ತರಕ್ಕೆ ಬೆಳೆಯುವ ಚೆಲುವಾದ ನಿತ್ಯ ಹಸುರಿನ ಮರ. ತೊಗಟೆ ಬೂದಿ ಬಣ್ಣದ್ದು, ಕತ್ತರಿಸಿದರೆ ಒಳಗೆ ಹಳದಿ ಬಣ್ಣಕ್ಕಿದೆ. ಗಾಯ ಮಾಡಿದರೆ ಹಾಲ್ರಸ ಒಸರುತ್ತದೆ. ಮರದ ರೆಂಬೆಗಳು ಮುಖ್ಯ ಕಾಂಡದ ತುದಿಯಿಂದ ಹೆಚ್ಚು ಕಡಿಮೆ ಒಂದೇ ಉದ್ದಕ್ಕೆ ಬೆಳೆದಿದ್ದು ಕೊಡೆಯ ಕಡ್ಡಿಗಳಂತೆ ಜೋಡಣೆಗೊಂಡಿರುವುವು. ಎಲೆಗಳು ಕೂಡ 4-7ರ ವರ್ತುಲಗಳಲ್ಲಿ ಸಮಾವೇಶ ಗೊಂಡಿವೆ. ಹೂಗಳು ಚಿಕ್ಕವು; ಹಸುರು ಬಣ್ಣದವು ಹಾಗೂ ಸುವಾಸನೆಯುಳ್ಳವು. ಕಾಯಿ ಫಾಲಿಕಲ್ ಎಂಬ ಬಗೆಯದು. ಬಲು ಉದ್ದ ಅಂದರೆ ಸುಮಾರು 50 ಸೆಂಮೀ ಇರುತ್ತದೆ. ಸಾಮಾನ್ಯವಾಗಿ ಎರಡೆರಡು ಕಾಯಿಗಳು ಜೊತೆಯಾಗಿರುವುವು. 

	ಮದ್ದಾಲೆಯ ಚೌಬೀನೆ ಮೃದುವಾದ್ದೂ ಏಕರೀತಿಯ ಕಣರಚನೆಯುಳ್ಳದ್ದೂ ಆಗಿದೆ. ಶಾಶ್ವತ ಬಳಕೆಗಳಿಗೆ ಇದು ಉತ್ತಮವಾದುದಲ್ಲವಾದರೂ ಪೆಟ್ಟಿಗೆ, ಕಪ್ಪುಹಲಗೆ, ಸಣ್ಣಪುಟ್ಟ ಪೀಠೋಪಕರಣ, ಸ್ಲೇಟು ಚೌಕಟ್ಟು ಮುಂತಾದವುಗಳ ತಯಾರಿಕೆಗೆ ಒದಗುತ್ತದೆ. ಇದರ ತೊಗಟೆಗೆ ದಿಟಬಾರ್ಕ್ ಎಂಬ ವಾಣಿಜ್ಯನಾಮವುಂಟು. ಇದನ್ನು ಭೇದಿ ನಿಲ್ಲಿಸಲೂ ಜ್ವರವಿಳಿಸಲೂ ಬಳಸುವುದಿದೆ. ಹಿಂದೆ ಕ್ವಿನೀನಿನಂತೆಯೇ ಇದನ್ನೂ ಮಲೇರಿಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿತ್ತು. ಪಶ್ಚಿಮ ಭಾರತದ ಕೆಲವೆಡೆ ಮದ್ದಾಲೆ ಮರ ಪಿಶಾಚಿಗಳ ಆವಾಸಸ್ಥಾನವೆಂಬ, ಇದರಡಿ ಮಲಗಿದರೆ ಸಾವು ಸಂಭವಿಸುತ್ತದೆ. ಎಂಬ ಮೂಢನಂಬಿಕೆಯುಂಟು.
(ವಿ.ಎಸ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ